ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ತಾಳಮದ್ದಲೆ ಎಂಬ ಮಾತಿನ ನವನೀತ

ಲೇಖಕರು : ಶ್ರೀನಿಧಿ ಡಿ.ಎಸ್.
ಮ೦ಗಳವಾರ, ಒಕ್ಟೋಬರ್ 2 , 2012

ಯಕ್ಷಗಾನದ ಬಗ್ಗೆ ನಿಮಗೆಲ್ಲ ತಿಳಿದೇ ಇರುತ್ತದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಬಹು ಪ್ರಸಿದ್ದ ಕಲೆ ಅದು. ಯಕ್ಷಗಾನ ತಾಳಮದ್ದಲೆ, ಯಕ್ಷಗಾನದಿಂದ ಪ್ರೇರಿತವಾದ ಆದರೆ ಯಕ್ಷಗಾನಕ್ಕಿಂತ ಭಿನ್ನವಾಗಿ ಬೆಳೆದ ಪ್ರಾಕಾರ. ಗೆಳೆಯ ಸುಧನ್ವ ತಾಳಮದ್ದಲೆ ಬಗೆಗೊಂದಿಷ್ಟನ್ನ ಇಲ್ಲಿ ಬರೆದಿದ್ದಾನೆ. ಅದರ ಜೊತೆಗೊಂದಿಷ್ಟು ವಿಚಾರಗಳನ್ನ ನನಗೆ ಹಂಚಿಕೊಳ್ಳಬೇಕು ಅನ್ನಿಸಿತು.

ನನ್ನಪ್ಪ ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ. ಹೀಗಾಗಿ, ತಾಳಮದ್ದಲೆ ಎಂದರೇನು ಎಂದು ನೆಟ್ಟಗೆ ಅರ್ಥವಾಗುವ ಮುಂಚೆಯೇ, ಭಾಗವತರ ಹಿಂದೆ ಕೂತು ಹಾರ್ಮೋನಿಯಂ ಗಾಳಿ ಹಾಕುತ್ತಿದ್ದವನು ನಾನು. ಆಮೇಲೆ, ದಿನಗಳೆದ ಹಾಗೆ ತಾಳಮದ್ದಲೆಯ ರುಚಿ ಸಿಕ್ಕಿತು, ಇಷ್ಟವಾಗತೊಡಗಿತು. ಬೆಂಗಳೂರಿಗೆ ಬಂದ ಮೇಲೆ ಇತರೆಲ್ಲಾ ವಿಷಯಗಳಂತೆ, ತಾಳಮದ್ದಲೆಯನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ಯಕ್ಷಗಾನದ ಅಂಗವಾದ, ಯಕ್ಷಗಾನ ತಾಳಮದ್ದಲೆ ಅದರ ಜೊತೆ ಜೊತೆಗೇ ಬೆಳೆದು ಬಂದಿದೆ. ಕೆಲ ಸಂಶೋಧಕರು, ತಾಳಮದ್ದಲೆ ಎಂಬ ಕಲಾಪ್ರಕಾರ ಯಕ್ಷಗಾನಕ್ಕಿಂತಲೂ ಮೊದಲೇ ಇದ್ದಿರಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಕೃಷಿಕ ಕಲಾಸಕ್ತರು ಸಮಯ ಕಳೆಯಲು ಈ ತಾಳಮದ್ದಲೆ ಕೂಟಗಳನ್ನು ಹುಟ್ಟುಹಾಕಿದ್ದಿರಬಹುದು. ಒಬ್ಬ ಭಾಗವತರು, ಮದ್ದಲೆಗಾರ, ಹಾರ್ಮೋನಿಯಂ ಮತ್ತೆ ಜೊತೆಗಿಬ್ಬರು ಅರ್ಥಧಾರಿಗಳಿದ್ದರೆ, ತಾಳಮದ್ದಲೆಗೆ ವೇದಿಕೆ ಸಿದ್ದ. ಮನೆಯ ಹೊರಗಿನ ಜಗಲಿಯಿಂದ ಹಿಡಿದು, ದೊಡ್ಡ ಸಭಾಂಗಣದವರೆಗೂ ಇದರ ವ್ಯಾಪ್ತಿ ವಿಸ್ತಾರವಾಗಬಹುದು.

ಯಾವುದಾದರೊಂದು ಪೌರಾಣಿಕ - ಹೆಚ್ಚಾಗಿ ಕಡಿಮೆ ಪಾತ್ರಗಳಿರುವ, ಮಾತಿಗೆ ಮತ್ತು ಚರ್ಚೆಗೆ ಹೆಚ್ಚು ಅವಕಾಶವಿರುವ ಕೃಷ್ಣ ಸಂಧಾನ, ವಾಲಿವಧೆ, ಸುಧನ್ವ ಮೋಕ್ಷದಂತಹ ಪ್ರಸಂಗಗಳನ್ನು ಆಯ್ದುಕೊಂಡು ಕೂಟ ಜರುಗುತ್ತದೆ. ಪಂಚೆ-ಶಾಲು ಹೊದ್ದುಕೊಂಡು ಎದುರು ಬದರಾಗಿ ಕುಳಿತುಕೊಳ್ಳುವ ಅರ್ಥಧಾರಿಗಳು, ನೀವು ನೋಡ ನೋಡುತ್ತಿದ್ದ ಹಾಗೆ ತಾವು ಕರ್ಣ- ಅರ್ಜುನರಾಗುತ್ತಾರೆ. ಮತ್ತು ನಿಮ್ಮನ್ನು ಕುರುಕ್ಷೇತ್ರಕ್ಕೋ, ಹಸ್ತಿನಾವತಿಗೋ ಕರೆದೊಯ್ಯುತ್ತಾರೆ. ನೀವೂ ಎಲ್ಲೋ ಕೌರವನ ಆಸ್ಥಾನದಲ್ಲಿದ್ದ ಹಾಗೋ, ಕುರುಕ್ಷೇತ್ರದ ಯುದ್ಧ ನಡೆವಾಗ ಅಲ್ಲೇ ಪಕ್ಕದಲ್ಲೆಲ್ಲೋ ಇದ್ದೀರೋ ಅನ್ನಿಸುವ ಹಾಗೆ ಮಾಡಿಬಿಡುತ್ತಾರೆ.

ತಾವು ಪಾತ್ರವಾಗುವುದರ ಜತೆಗೆ ನೋಡುಗರನ್ನು ಪಾತ್ರದ ಪರಿಸರದೊಳಕ್ಕೆ ಎಳೆದೊಯ್ಯುವ ಅನೂಹ್ಯ ಸಾಧ್ಯತೆ ಇರುವ ಈ ತಾಳಮದ್ದಲೆ ನಿಜಕ್ಕೂ ಅದ್ಭುತ ಕಲೆ. ಯಾವುದೇ ವೇಷಭೂಷಣಗಳಿಲ್ಲದೇ, ಬರಿಯ ಮಾತೇ ಪ್ರಧಾನವಾಗಿರುವ ಕಲೆ ತಾಳಮದ್ದಲೆ. ಮಾತಿನ ಮಂಥನ, ಜಿಜ್ಞಾಸೆ, ಚರ್ಚೆ, ವಾದಗಳೇ ಕೂಟವೊಂದರ ಬಂಡವಾಳ. ಜೊತೆಗೆ ಪಾತ್ರಧಾರಿಗಿರಬೇಕಾದ್ದು ಪಾತ್ರೌಚಿತ್ಯ ಮತ್ತು ಪ್ರತ್ಯುತ್ಪನ್ನ ಮತಿತ್ವ- ಸ್ಪಾಂಟೇನಿಟಿ.

ಹಾಗೆ ನೋಡಿದರೆ ಯಕ್ಷಗಾನಕ್ಕೆ, ತಾಳಮದ್ದಲೆಗಿಂತ ಒಂದು ಕೈ ಹೆಚ್ಚೇ ಅನ್ನಿಸುವಷ್ಟು ಅಡ್ವಾಂಟೇಜ್ ಇದೆ. ಆ ಬಣ್ಣ ಬಣ್ಣದ ವೇಷಗಳು- ಗದೆ ಕತ್ತಿ ಬಿಲ್ಲುಗಳು.. ರಾತ್ರೆಯ ವಾತಾವರಣ- ಇವೆಲ್ಲ ಸೇರಿ ಏನೋ ಒಂದು ಮಾಂತ್ರಿಕ ವಾತಾವರಣ ನಿರ್ಮಿಸಿಬಿಡುತ್ತವೆ. ಆದರೆ ತಾಳಮದ್ದಲೆಗೆ ಹಾಗಿಲ್ಲ. ಅರ್ಥದಾರಿಗೆ ತನ್ನ ಮಾತೇ ಕವಚ, ಬಿಲ್ಲು, ಬಾಣ ಎಲ್ಲ. ಕೇಳುಗನನ್ನು ಕೇವಲ ಮಾತುಗಳಲ್ಲೇ ಕಟ್ಟಿ ಹಾಕಬೇಕಾದ ಅನಿವಾರ್ಯತೆ ಆತನಿಗೆ. ಆದರೆ ಅದೇ ವರದಾನವಾಗಿ ಪರಿಣಮಿಸಿದೆ ಎನ್ನಬಹುದೇನೋ. ಯಕ್ಷಗಾನದಲ್ಲಿ ದಿಗಿಣ ತೆಗೆವುದೇ ಮಹದಾಗಿ, ಪಾತ್ರಗಳ ಮಧ್ಯ ಚರ್ಚೆ ನಡೆಯುವುದೇ ಕಡಿಮೆಯಾಗಿದೆ ಇತ್ತೀಚಿಗೆ. ಬರಿಯ ಪದ್ಯದ ಅರ್ಥ ಹೇಳಿ- ಕೆಲ ಬಾರಿ ಅದೂ ಇಲ್ಲದೇ ಪ್ರಸಂಗ ಮುಂದುವರಿಯುತ್ತದೆ.

ಅಲ್ಲದೇ ಇತ್ತೀಚಿನ ದಿನಗಳಲ್ಲಿ ಯಕ್ಷಗಾನಗಳಲ್ಲಿ ಪೌರಾಣಿಕ ಪ್ರಸಂಗಗಳನ್ನು ಬದಿಗೆ ಸರಿಸುವಷ್ಟು ಜೋರಿನಲ್ಲಿ ಚಲನಚಿತ್ರ ಆಧಾರಿತವೋ, ಮತ್ತೊಂದೋ- ಕಾಲ್ಪನಿಕ ಕಥೆಗಳೇ ರಂಗದ ಮೇಲೆ ವಿಜೃಂಭಿಸುತ್ತಿವೆ ಮತ್ತು ಅವುಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಪೌರಾಣಿಕ ಯಕ್ಷಗಾನಗಳು ಕೇವಲ ಹರಕೆ ಬಯಲಾಟಗಳಿಗಷ್ಟೇ ಸೀಮಿತವಾಗುತ್ತಿರುವ ಅಪಾಯ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ, ತಾಳಮದ್ದಲೆ ಕ್ಷೇತ್ರ ತನ್ನ ಸ್ವಂತಿಕೆ ಕಳೆದುಕೊಂಡಿಲ್ಲ ಮತ್ತು ಇನ್ನು ಕೂಡ ಪೌರಾಣಿಕದ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಿದೆ.

ತಾಳಮದ್ದಲೆಯ ಅರ್ಥಧಾರಿಗಳು ಸದಾ ಅಧ್ಯಯನ ನಿರತರು. ಒಂದು ಪ್ರಸಂಗದ ಯಾವುದೋ ಒಂದು ಸನ್ನಿವೇಶವನ್ನು ಎದುರಿಸುವಾಗ ಅದೆಷ್ಟು ಪುರಾಣಗಳ, ಇತಿಹಾಸದ ಘಟನೆಗಳನ್ನು ಉಲ್ಲೇಖಿಸುತ್ತಾರೆಂದರೆ, ಕೇಳುಗ ಬೆರಗಾಗದೇ ಬೇರೆದಾರಿಯಿಲ್ಲ. ಕೂತಲ್ಲೇ ನಮಗೂ ಜ್ಞಾನಾರ್ಜನೆ ಕೂಡ. ಇನ್ನು ಅಧ್ಯಯನದ ಜೊತೆಗೆ, ಸಮಕಾಲೀನ ಸಂಗತಿಗಳನ್ನು ಬೆರೆಸಿ, ಎಷ್ಟು ಚೆನ್ನಾಗಿ ಮಾತನಾಡುತ್ತಾರೆ ಅಂದರೆ, ಆಹಾ!

ವಾಲಿ ಸುಗ್ರೀವರು ಮಾತನಾಡುವಾಗಲೋ, ದುರ್ಯೋಧನ -ಕೃಷ್ಣರ ಸಂಭಾಷಣೆಯಾಗುವಾಗಲೋ ಈಗಿನ ಪಕ್ಷ ರಾಜಕಾರಣ- ಪಕ್ಷಾಂತರ- ಸರಕಾರಗಳನ್ನು ಎಷ್ಟು ಚೆನ್ನಾಗಿ ಮಾತಿನೊಳಗೆ ತರುತ್ತಾರೆಂದರೆ- ಕೇಳುಗರು ಕೂತಲ್ಲಿಯೇ ಹಸ್ತಿನಾವತಿಯಿಂದ ವಿಧಾನಸೌಧಕ್ಕೂ ಹೋಗಿ ಬರುತ್ತಾರೆ. ಮೊನ್ನೆ ಬೆಂಗಳೂರಿನಲ್ಲಿ ಜರುಗಿದ ತಾಳಮದ್ದಲೆಯಲ್ಲಿ ವಾಲಿ, "ಅಯ್ಯಾ ರಾಮಾ, ಅಯೋಧ್ಯೆಯಂತಹ ದಿವ್ಯ, ಪವಿತ್ರ ಭೂಮಿಯನ್ನು ದಾಸಿಯೊಬ್ಬಳಿಗೆ ದಾನ ಮಾಡಿದಿರಲ್ಲಯ್ಯ" ಎಂದು ಮಂಥರೆಯನ್ನು ಉದ್ದೇಶಿಸಿ ರಾಮನ ಬಳಿ ಹೇಳಿದರೆ, ವಾಲಿಯ ಗುರಿ ಎಲ್ಲಿತ್ತು ಎನ್ನುವುದು, ನೆರೆದಿದ್ದ ಎಲ್ಲರಿಗೂ ಅರ್ಥವಾಗಿ ಹೋಯಿತು.

ತಾಳಮದ್ದಲೆಯ ಸರಳತೆಯೇ ಅದರ ಯಶಸ್ಸಿಗೂ ಕಾರಣ ಅನ್ನಿಸುತ್ತದೆ. ಇತರೆಡೆಗಳಲ್ಲಿ ಹೆಚ್ಚಿಗೆ ಪ್ರಸಿದ್ಧವಾಗದಿದ್ದರೂ ಮೇಲೆ ಹೇಳಿದ ಮೂರು ಜಿಲ್ಲೆಗಳಲ್ಲಿ ಈ ತಾಳಮದ್ದಲೆ ಅತ್ಯಂತ ವ್ಯಾಪಕವಾಗಿ ಬೆಳೆದಿದೆ, ಬೆಳೆಯುತ್ತಿದೆ.

ಇಂದು ತಾಳಮದ್ದಲೆ ಹಲ ಬದಲಾವಣೆಗಳನ್ನು ಮೈಗೂಡಿಸಿಕೊಳ್ಳುತ್ತಿದೆ. ರಾತ್ರಿಯಿಡೀ ಜರುಗುವ ಆರೆಂಟು ತಾಸುಗಳ ಕೂಟಗಳು ಕಡಿಮೆಯಾಗುತ್ತಿವೆ. ಕಾಲದ ಜೊತೆಗೆ ತಾನೂ ಬದಲಾಗಬೇಕಾದ ಅನಿವಾರ್ಯತೆ ತಾಳಮದ್ದಲೆಗೆ ಬಂದೊದಗಿದೆ. ಈಗೀಗ ಮೂರು ತಾಸಿನ ತಾಳಮದ್ದಲೆಗಳು ಹೆಚ್ಚುತ್ತಿವೆ. ರೇಡಿಯೋದಲ್ಲಂತೂ ಒಂದೇ ತಾಸಿನ ತಾಳಮದ್ದಲೆ. ಹಿಂದಿನಂತೆ ದೊಡ್ಡ ಪೀಠಿಕೆಗಳಿಂದ ಪಾತ್ರ ಚಿತ್ರಣ ಆರಂಭಿಸುತ್ತಿದ್ದವರು ಕಡಿಮೆಯಾಗಿದ್ದಾರೆ. ಗಂಭೀರ ಚಿಂತನೆಗಳನ್ನು ಕೇಳುವ ಜನ ಕಡಿಮೆಯಾಗುತ್ತಿದ್ದಾರೆ ಅನ್ನುವ ಕಾರಣಕ್ಕೆ ಹಾಸ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿದೆ.

ಆದರೆ ಇಂದಿಗೂ ಮಲೆನಾಡಿನ ಮನೆಗಳಲ್ಲಿ, ಜಿಟಿ ಜಿಟಿ ಮಳೆ ಹೊಯ್ಯುತ್ತಿರುವ ಅದೆಷ್ಟೋ ಸಂಜೆಗಳಲ್ಲಿ ತಾಳಮದ್ದಲೆಗಳು ಜರುಗುತ್ತವೆ. ಮದುವೆ ಮನೆಗಳು, ಉಪನಯನ, ಶ್ರಾದ್ಧದಂತಹ ಧಾರ್ಮಿಕ ಕಾರ್ಯಗಳ ನಂತರ ತಾಳಮದ್ದಲೆ ಕೂಟ ಏರ್ಪಡಿಸಲಾಗುತ್ತದೆ. ದಕ್ಷಿಣೋತ್ತರ ಕನ್ನಡದಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ನೂರಾರು ಯಕ್ಷಗಾನ ತಾಳಮದ್ದಲೆ ನಡೆಸುವ ಸಂಘಸಂಸ್ಥೆಗಳಿವೆ. ಯಕ್ಷಗಾನ ತಾಳಮದ್ದಲೆ ಸಪ್ತಾಹಗಳಾಗುತ್ತವೆ, ಸ್ಪರ್ಧೆಗಳು ನಡೆಯುತ್ತವೆ. ಹೊಸ ಹೊಸ ಯುವಕರು ಈ ಕ್ಷೇತ್ರವನ್ನು ತಮ್ಮ ಹವ್ಯಾಸದ ಪರಿಧಿಯೊಳಗೆ ಸೇರಿಸಿಕೊಂಡಿದ್ದಾರೆ.



ಕೃಪೆ : http://kannada.oneindia.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ